ಸ್ಟಾರ್ ಮ್ಯೂಚುಯಲ್ ಫಂಡ್ ರೇಟಿಂಗ್‌ಗಳು ಉಪಯುಕ್ತವಾಗಿರಬಹುದು, ಆದರೆ ಅವು ಸಂಪೂರ್ಣ ಕಥೆಯನ್ನು ಹೇಳುವುದಿಲ್ಲ. ರೇಟಿಂಗ್‌ಗಳನ್ನು ಹೇಗೆ ಅರ್ಥೈಸಬೇಕು, ನಿಮ್ಮ ಗುರಿಗಳಿಗೆ ಹೊಂದುವ ಫಂಡ್‌ಗಳನ್ನು ಹೇಗೆ ಆಯ್ಕೆ ಮಾಡಬೇಕು, ಮತ್ತು ದೀರ್ಘಕಾಲಿಕ ಯಶಸ್ಸಿಗಾಗಿ ಜಾಣತನದಿಂದ ಹೂಡಿಕೆ ಮಾಡುವ ವಿಧಾನಗಳನ್ನು ತಿಳಿದುಕೊಳ್ಳಿ.
ನೀವು ಯಾವಾಗಲಾದರೂ onlineನಲ್ಲಿ ಮ್ಯೂಚುಯಲ್ ಫಂಡ್‌ಗಳನ್ನು ಹುಡುಕಿದ್ದರೆ, ಆ ಹೊಳೆಯುವ 5-ಸ್ಟಾರ್ ರೇಟಿಂಗ್‌ಗಳನ್ನು ನೋಡಿರುವ ಸಾಧ್ಯತೆ ಹೆಚ್ಚು. ಅವು ಭರವಸೆಯನ್ನು ನೀಡುವಂತಿವೆ, ಒಂದು ಗುಣಮಟ್ಟದ ಮುದ್ರೆಯಂತೆಯೇ ಕಾಣುತ್ತವೆ. “5 ಸ್ಟಾರ್ ಇದ್ದರೆ ಇದು ಖಂಡಿತವಾಗಿಯೂ ಅತ್ಯುತ್ತಮ ಫಂಡ್ ಆಗಿರಬೇಕು” ಎಂದು ಯೋಚಿಸುವುದು ಸಹಜ. ಬಹುತೇಕ ಹೂಡಿಕೆದಾರರು, ಸ್ವತಃ ಹೂಡಿಕೆ ಮಾಡುವವರಾಗಲಿ (DIY) ಅಥವಾ ಮ್ಯೂಚುಯಲ್ ಫಂಡ್ ಡಿಸ್ಟ್ರಿಬ್ಯೂಟರ್ ಅಥವಾ ಹಣಕಾಸು ಸಲಹೆಗಾರರ ಮೂಲಕ ಹೂಡಿಕೆ ಮಾಡುವವರಾಗಲಿ, ಇದೇ ನಂಬಿಕೆಯನ್ನು ಹೊಂದಿರುತ್ತಾರೆ.
ಅಷ್ಟೇ ಅಲ್ಲ, ನಾವು ಹೂಡಿಕೆ ಮಾಡಿದ ಫಂಡ್ ಕೆಲ ಸಮಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೆ, ಆ ಸಮಯದಲ್ಲಿ 5-ಸ್ಟಾರ್ ರೇಟಿಂಗ್ ಹೊಂದಿರುವ ಮತ್ತೊಂದು ಫಂಡ್‌ಗೆ ಬದಲಾಯಿಸಲು ಬಯಸುತ್ತೇವೆ. ಹೂಡಿಕೆದಾರರಲ್ಲಿ ತಮ್ಮ ಹೂಡಿಕೆಗಳು ಯಾವಾಗಲೂ ಟಾಪ್-ರೇಟೆಡ್ ಫಂಡ್‌ಗಳಲ್ಲಿ ಇರಬೇಕು ಎಂಬ ಒಂದು ಆಸಕ್ತಿ ಇರುತ್ತದೆ.
ಆದರೆ ಸತ್ಯವೇನೆಂದರೆ, ಕೇವಲ ಸ್ಟಾರ್ ರೇಟಿಂಗ್ ಆಧರಿಸಿ ಫಂಡ್ ಆಯ್ಕೆ ಮಾಡುವುದು ತಪ್ಪು ದಾರಿಗೆಳೆಯಬಹುದು. ರೇಟಿಂಗ್‌ಗಳು ಏಕೆ ಏಕೈಕ ಮಾನದಂಡವಾಗಿರಬಾರದು ಎಂಬುದನ್ನು ನೋಡೋಣ.
5-ಸ್ಟಾರ್ ರೇಟಿಂಗ್ ಹೊಂದಿರುವ ಮ್ಯೂಚುಯಲ್ ಫಂಡ್‌ಗಳು ಸದಾ ಉತ್ತಮ ಮತ್ತು ಸ್ಥಿರ ಪ್ರದರ್ಶನ ನೀಡುತ್ತವೆಯೇ?
ಇಲ್ಲ! 5-ಸ್ಟಾರ್ ರೇಟಿಂಗ್ ಹೊಂದಿರುವ ಫಂಡ್ ಒಂದು ಸಮಯದಲ್ಲಿ 3-ಸ್ಟಾರ್ ಅಥವಾ 1-ಸ್ಟಾರ್‌ಗೆ ಇಳಿಯಬಹುದು, ಹಾಗೆಯೇ ಅದರ ವಿರುದ್ಧವೂ ಸಂಭವಿಸಬಹುದು.
ಫಂಡ್ ರೇಟಿಂಗ್‌ಗಳು ಮುಖ್ಯವಾಗಿ ಫಂಡ್‌ನ ಹಿಂದಿನ ಪ್ರದರ್ಶನದ ಫಲಿತಾಂಶವಾಗಿರುತ್ತವೆ. ಅವು ಭವಿಷ್ಯದಲ್ಲೂ ಅದೇ ರೀತಿಯ ಅಥವಾ ಸ್ಥಿರ ಪ್ರದರ್ಶನ ನೀಡುತ್ತವೆ ಎಂಬ ಖಚಿತತೆ ಅಥವಾ ಭರವಸೆ ಅಲ್ಲ.
ಅತ್ಯುತ್ತಮ ಫಂಡ್ ಮ್ಯಾನೇಜರ್‌ಗಳೇ ತಮ್ಮ ಹೂಡಿಕೆ ಆಯ್ಕೆಗಳಲ್ಲಿ 50–55% ಯಶಸ್ಸನ್ನು ಪಡೆದು ಕೊಳ್ಳುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಮಾರುಕಟ್ಟೆಯೇ ಮುಖ್ಯವಾಗಿ ಲಾಭದಾಯಕತೆಯನ್ನು ನಿರ್ಧರಿಸುತ್ತದೆ. ಫಂಡ್ ಮ್ಯಾನೇಜರ್‌ಗಳು ಸೂಕ್ತವಾದ portfolio ನಿರ್ಮಿಸಲು ಶ್ರಮಿಸುತ್ತಾರೆ ಮತ್ತು ಅವಶ್ಯಕತೆ ಇದ್ದಾಗ ತಿದ್ದುಪಡಿ ಮಾಡುತ್ತಾರೆ.
ಆದರೆ ರಾಜಕೀಯ, ಜಾಗತಿಕ ರಾಜಕೀಯ (geopolitical) ಪರಿಸ್ಥಿತಿ, ತೈಲದ ಬೆಲೆ, ಹವಾಮಾನ (ಬೇಡಿಕೆ-ಪೂರೈಕೆಗೆ ಪರಿಣಾಮ ಬೀರುವಂತಹ) ಮತ್ತು ಇನ್ನೂ ಅನೇಕ ಅಂಶಗಳು ಅವರ ನಿಯಂತ್ರಣದ ಹೊರಗೆ ಇರುತ್ತವೆ. ಇಂತಹ ಅಂಶಗಳು ಚೆನ್ನಾಗಿ ರೂಪಿಸಲಾದ ಪೋರ್ಟ್‌ಫೋಲಿಯೊವನ್ನೂ ಕೆಲಕಾಲ ಕುಗ್ಗಿಸಬಹುದು.
ರೇಟಿಂಗ್ ಏಜೆನ್ಸಿಗಳ ದೃಷ್ಟಿಯಿಂದ, PE ratio, PB ratio, standard deviation, concentration ಮುಂತಾದ ಹಲವು ಮಾನದಂಡಗಳನ್ನು ಪರಿಗಣಿಸಿದರೂ, ಅಂತಿಮವಾಗಿ ಕೇಂದ್ರ ಬಿಂದು ಫಂಡ್‌ನ ಪ್ರದರ್ಶನವೇ ಆಗಿರುತ್ತದೆ. ರೇಟಿಂಗ್‌ಗಳು ಸಾಮಾನ್ಯವಾಗಿ ಫಂಡ್‌ನ ಇತಿಹಾಸದ ಪ್ರತಿಬಿಂಬವಾಗಿದ್ದು, ಅದೇ ವರ್ಗದ ಇತರ ಫಂಡ್‌ಗಳೊಂದಿಗೆ ತಾತ್ಕಾಲಿಕ ಹೋಲಿಕೆಯನ್ನು ತೋರಿಸುತ್ತವೆ.
ಹೀಗಾಗಿ, ರೇಟಿಂಗ್ ಆಧರಿಸಿ ಭವಿಷ್ಯದಲ್ಲೂ ಅದೇ ಪ್ರದರ್ಶನ ನಿರೀಕ್ಷಿಸುವುದು ಸರಿಯಲ್ಲ. ಜೊತೆಗೆ, ಪ್ರತಿ ರಿಸರ್ಚ್ ಏಜೆನ್ಸಿಯೂ ತನ್ನದೇ ಆದ ವಿಧಾನವನ್ನು ಅನುಸರಿಸುತ್ತದೆ. ಆದ್ದರಿಂದ ಇದು ಕಾಣುವಷ್ಟು ಸರಳ ವಿಷಯವಲ್ಲ.
ಮ್ಯೂಚುಯಲ್ ಫಂಡ್ ರೇಟಿಂಗ್‌ಗಳು ಹೇಗೆ ನಿರ್ಧರಿಸಲಾಗುತ್ತವೆ?
ಒಳ್ಳೆಯ ರೇಟಿಂಗ್ ಎಂದರೆ ಸಾಮಾನ್ಯವಾಗಿ ಫಂಡ್‌ಗೆ ಉತ್ತಮ ಪ್ರದರ್ಶನದ ಇತಿಹಾಸವಿದೆ ಎಂದರ್ಥ.
ಫಂಡ್‌ನ ಪ್ರದರ್ಶನ ಹಲವು ಅಂಶಗಳಿಂದ ಪ್ರಭಾವಿತವಾಗುತ್ತದೆ, ಫಂಡ್‌ನ ಥೀಮ್, ಹೂಡಿಕೆ ಶೈಲಿ, ಮಾರುಕಟ್ಟೆ ಪರಿಸ್ಥಿತಿ, ವಲಯವಾರು (sectoral) ಬದಲಾವಣೆಗಳು ಇತ್ಯಾದಿ.
ರೇಟಿಂಗ್‌ಗಳು ಸಾಮಾನ್ಯವಾಗಿ ಈ ಕೆಳಗಿನ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತವೆ:
- ಇತಿಹಾಸಾತ್ಮಕ ಪ್ರದರ್ಶನ
- ಅಪಾಯ-ಹೊಂದಿಸಿದ ಲಾಭ (risk-adjusted returns)
- ಮಾರುಕಟ್ಟೆಯ ಚಕ್ರಗಳಲ್ಲಿ ಪ್ರದರ್ಶನ
- ಸಮಾನ ಫಂಡ್‌ಗಳೊಂದಿಗೆ ಹೋಲಿಸಿದಾಗ ಸ್ಥಿರತೆ
- ಫಂಡ್ ಮ್ಯಾನೇಜರ್‌ನ ಟ್ರ್ಯಾಕ್ ರೆಕಾರ್ಡ್
ಆದರೆ ರೇಟಿಂಗ್ ನಿರ್ಧಾರಕ್ಕೆ ಯಾವುದೇ ವಿಶ್ವವ್ಯಾಪಿ ನಿಯಮಗಳು ಅಥವಾ ನಿಯಂತ್ರಣ ಮಾರ್ಗಸೂಚಿಗಳು ಇಲ್ಲ. ಇದು ಸ್ಟಾರ್ ರೇಟಿಂಗ್ ಸ್ಥಿರತೆ ಅಥವಾ ಭವಿಷ್ಯದ ಭರವಸೆಯ ಸೂಚಕವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಕೆಲವು ಫಂಡ್‌ಗಳು ಇತ್ತೀಚಿನ ಉತ್ತಮ ಪ್ರದರ್ಶನದ ಕಾರಣದಿಂದ ಹೆಚ್ಚಿನ ರೇಟಿಂಗ್ ಪಡೆಯಬಹುದು. ಆದರೆ ಪ್ರತಿ ಫಂಡ್ ಏರಿಳಿತಗಳ ಚಕ್ರವನ್ನು ಅನುಭವಿಸುತ್ತದೆ. ಅದು ಮಾರುಕಟ್ಟೆ ಅಂಶಗಳ ಕಾರಣವಾಗಿರಬಹುದು ಅಥವಾ ಹೂಡಿಕೆ ಶೈಲಿ (growth, value ಇತ್ಯಾದಿ) ಕಾರಣವಾಗಿರಬಹುದು. ಕೆಲವೊಮ್ಮೆ fund management companyಯ ಜಾಗ್ರತೆಯ ನಿಲುವು ಲಾಭವನ್ನು ತಪ್ಪಿಸಬಹುದು.
ಕಡಿಮೆ ಇತಿಹಾಸವಿರುವ ಹೊಸ ಫಂಡ್‌ಗಳು ಇತ್ತೀಚಿನ ಪ್ರದರ್ಶನದ ಆಧಾರದ ಮೇಲೆ ಉತ್ತಮ ರೇಟಿಂಗ್ ಪಡೆಯಬಹುದು ಅಥವಾ ರೇಟಿಂಗ್ ಪಡೆಯದೇ ಇರಬಹುದು. ಆದರೆ ಅದರಿಂದ ಅವು ಕೆಟ್ಟ ಆಯ್ಕೆಯಾಗುತ್ತವೆಯೇ? ಇಲ್ಲ. ಅವುಗಳನ್ನು ವಿಶ್ಲೇಷಿಸಲು ಸಾಕಷ್ಟು ಇತಿಹಾಸದ ಡೇಟಾ ಲಭ್ಯವಿಲ್ಲ ಎಂಬುವುದೊಂದೇ ಅರ್ಥ.
ಹೂಡಿಕೆದಾರರು ಏನನ್ನು ಗಮನಿಸಬೇಕು?
ರೇಟಿಂಗ್‌ಗಳು ಪ್ರಾರಂಭಿಕ ಮಾರ್ಗದರ್ಶಕವಾಗಬಹುದು, ಆದರೆ ಅವೇ ಅಂತಿಮ ಮಾನದಂಡವಾಗಬಾರದು. ನಿಮ್ಮ ಹೂಡಿಕೆಗಳು ನಿಮ್ಮ ಆರ್ಥಿಕ ಗುರಿಗಳಿಂದ ಪ್ರಾರಂಭವಾಗಬೇಕು.
1. ಕಿರು, ಮಧ್ಯ ಮತ್ತು ದೀರ್ಘಾವಧಿ ಆರ್ಥಿಕ ಗುರಿಗಳನ್ನು ಗುರುತಿಸಿ
ಕಿರು ಅವಧಿ (3 ತಿಂಗಳು – 3 ವರ್ಷ): ತುರ್ತು ನಿಧಿಯ ನಿರ್ಮಾಣ, ಪ್ರವಾಸ, ಇತ್ಯಾದಿ.
ಮಧ್ಯಾವಧಿ (3 – 5 ವರ್ಷ): ಕಾರು ಖರೀದಿ, ಉನ್ನತ ಶಿಕ್ಷಣ, ಮನೆ ಖರೀದಿ.
ದೀರ್ಘಾವಧಿ (5 – 6+ ವರ್ಷ): ನಿವೃತ್ತಿ ಯೋಜನೆ, ಮಕ್ಕಳ ಭವಿಷ್ಯ, ಆರ್ಥಿಕ ಸ್ವಾತಂತ್ರ್ಯ.
(ಗುರಿಗಳು ವ್ಯಕ್ತಿಗತವಾಗಿ ಬದಲಾಗಬಹುದು; ತಜ್ಞರ ಸಲಹೆ ಪಡೆಯಬಹುದು.)
2. ಗುರಿ ಸಾಧನೆಗೆ ಬೇಕಾದ ಸಮಯ ನಿರ್ಧರಿಸಿ
ಉದಾಹರಣೆಗೆ, ನೀವು 30 ವರ್ಷ ವಯಸ್ಸಿನವರಾಗಿದ್ದು 50ರಲ್ಲಿ ನಿವೃತ್ತಿ ಪಡೆಯಲು ಬಯಸಿದರೆ, ನಿಮಗೆ 20 ವರ್ಷಗಳ ಅವಧಿಯಿದೆ. ಇದು ದೀರ್ಘಾವಧಿ ಗುರಿ.
3. ಅಪಾಯ ಸಹಿಷ್ಣುತೆ (Risk Tolerance) ಅರ್ಥಮಾಡಿಕೊಳ್ಳಿ
ಕಡಿಮೆ ಅಪಾಯ – ಕಡಿಮೆ ಲಾಭ: ಕಿರು ಅವಧಿಗೆ ಸೂಕ್ತ.
ಮಧ್ಯಮ ಅಪಾಯ: ಮಧ್ಯಾವಧಿ ಗುರಿಗಳಿಗೆ.
ಹೆಚ್ಚು ಅಪಾಯ – ಹೆಚ್ಚು ಲಾಭ: ದೀರ್ಘಾವಧಿ ಗುರಿಗಳಿಗೆ, ಹಣದುಬ್ಬರ (inflation) ಮೀರಿದ ಬೆಳವಣಿಗೆಗಾಗಿ.
4. ಸೂಕ್ತ ಮ್ಯೂಚುಯಲ್ ಫಂಡ್ ವರ್ಗ ಆಯ್ಕೆಮಾಡಿ
ಕಿರು ಅವಧಿಗೆ: Liquid Fund, Arbitrage Fund, Ultra-Short Fund
ಮಧ್ಯಾವಧಿಗೆ: Dynamic Asset Allocation fund, Hybrid fund
ದೀರ್ಘಾವಧಿಗೆ: Diversified equity fund, index funds and gold funds
5. ಸರಿಯಾದ ಫಂಡ್ ಆಯ್ಕೆಮಾಡಿ
ವರ್ಗ ವನ್ನು ನಿರ್ಧರಿಸಿದ ನಂತರ, ಆ ವರ್ಗದಲ್ಲಿರುವ ಸೂಕ್ತ fund ಅನ್ನು ಆಯ್ಕೆ ಮಾಡಬೇಕು. Equity ಫಂಡ್‌ಗಳಲ್ಲಿ large, mid, small cap ಹೂಡಿಕೆಗಳ ಸಮತೋಲನ ಇರಬೇಕು.
ರೇಟಿಂಗ್ ಅನ್ನು ಸಹಾಯಕವಾಗಿ ಬಳಸಿ, ನಿಯಮವಾಗಿ ಅಲ್ಲ
ಸ್ಟಾರ್ ರೇಟಿಂಗ್ ಆಯ್ಕೆಯನ್ನು ಸೀಮಿತಗೊಳಿಸಲು ಸಹಾಯಕವಾಗಬಹುದು, ಆದರೆ ಅಂತಿಮ ನಿರ್ಧಾರ ಅದೇ ಆಧಾರವಾಗಬಾರದು. ರೇಟಿಂಗ್‌ಗಳು ಇತಿಹಾಸದ ಪ್ರದರ್ಶನವನ್ನು ಪ್ರತಿಬಿಂಬಿಸುತ್ತವೆ ಎಂಬುವುದನ್ನು ಮನದಟ್ಟು ಮಾಡಿಕೊಳ್ಳಬೇಕು.
ರೇಟಿಂಗ್ ಆಧರಿಸಿ ಫಂಡ್ ಆಯ್ಕೆ ಮಾಡಿದ ನಂತರ, ಅದರ ಹೂಡಿಕೆ ತಂತ್ರ, ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಸ್ಥಿರತೆ, ಪೋರ್ಟ್‌ಫೋಲಿಯೊ ಸಂಯೋಜನೆ, ಅಪಾಯ ಮಟ್ಟ ಇತ್ಯಾದಿಗಳನ್ನು ಆಳವಾಗಿ ವಿಶ್ಲೇಷಿಸಿ. ಮುಖ್ಯವಾಗಿ, ಫಂಡ್‌ನ ಉದ್ದೇಶಗಳು ಮತ್ತು ನಿಮ್ಮ ಗುರಿಗಳಿಗೆ ಹೊಂದಿಕೆಯಾಗುತ್ತಿವೆಯೇ ಎಂಬುದನ್ನು ಗಮನಿಸಬೇಕು.
ಹಣಕಾಸು ಸಲಹೆಗಾರರ ಸಹಾಯ ಪಡೆಯುವುದು ಉತ್ತಮ.
ಜಾಣ್ಮೆಯಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ
ಹೂಡಿಕೆ ಎಂದರೆ ಕೇವಲ ಅತ್ಯುನ್ನತ ರೇಟಿಂಗ್ ಹೊಂದಿರುವ ಯೋಜನೆಗಳನ್ನು ಹಿಂಬಾಲಿಸುವುದಲ್ಲ. ನಿಮ್ಮ ಗುರಿಗಳು ಮತ್ತು ಅಪಾಯ ಸಹಿಷ್ಣುತೆ ಆಧರಿಸಿ ಹೂಡಿಕೆಗಳನ್ನು ಹೊಂದಿಸುವುದಾಗಿದೆ.
ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ಕೇವಲ 5-ಸ್ಟಾರ್ ಫಂಡ್‌ಗಳನ್ನು ಮಾತ್ರ ಇರಬೇಕು ಎಂದು ಬಯಸಿದರೆ, ನೀವು ಆಗಾಗ ಫಂಡ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಇದು wealth creation ಪ್ರಯಾಣಕ್ಕೆ ಅಡ್ಡಿಯಾಗುತ್ತದೆ ಮತ್ತು ಹೆಚ್ಚುವರಿ ತೆರಿಗೆ ಹೊರೆ ತರಬಹುದು. ಜೊತೆಗೆ, ಮರುಹೂಡಿಕೆ ಅಪಾಯ (reinvestment risk) ಉಂಟಾಗಬಹುದು.
ಅದರ ಬದಲು:
- ಸ್ಪಷ್ಟ ಆರ್ಥಿಕ ಗುರಿಗಳನ್ನು ಹೊಂದಿರಿ
- ಅಪಾಯ ಸಹಿಷ್ಣುತೆ ಅರ್ಥಮಾಡಿಕೊಳ್ಳಿ
- ಸೂಕ್ತ ಫಂಡ್ ವರ್ಗಗಳನ್ನು ಆಯ್ಕೆಮಾಡಿ
- ಆದಾಯ ಹೆಚ್ಚಾದಂತೆ ಹೂಡಿಕೆ ಹೆಚ್ಚಿಸಿ
- ಶಿಸ್ತಿನ ಮತ್ತು ಸ್ಥಿರತೆಗೆ ಮಹತ್ವ ನೀಡಿ
- ತಜ್ಞರ ಸಲಹೆ ಪಡೆಯಿರಿ
ಹೂಡಿಕೆ ಒಂದು ಪ್ರಯಾಣ, ಓಟವಲ್ಲ. ತ್ವರಿತ ಲಾಭಕ್ಕಿಂತ ದೀರ್ಘಾವಧಿಯಲ್ಲಿ ನಿಮಗೆ ಕೆಲಸ ಮಾಡುವ ತಂತ್ರಕ್ಕೆ ಬದ್ಧರಾಗಿರುವುದೇ ಯಶಸ್ವಿ ಹೂಡಿಕೆಯ ಮಂತ್ರ.

Shreedhara is the Founder & Director of Ara Financial Services Pvt. Ltd. He has an experience of over 2 decades in Financial Service Industry with majority of it in guiding individuals and institutions on their investments requirements.



