ಆರಂಭದಲ್ಲಿ SIP ರಿಟರ್ನ್ಸ್ ನಿಧಾನವಾಗಿ ಕಾಣಿಸುವುದೇಕೆ? 8-4-3 ನಿಯಮದ ವಿವರಣೆ

SIP ಹೂಡಿಕೆ ಆರಂಭಿಸಿದ ಮೊದಲ ಕೆಲವು ವರ್ಷಗಳಲ್ಲಿ ನಿರೀಕ್ಷಿತ ಬೆಳವಣಿಗೆ ಕಾಣಿಸದೇ ನಿರಾಶೆಯಾಗುತ್ತಿದೆಯೇ? ಚಕ್ರಬಡ್ಡಿಯ ಶಕ್ತಿಯನ್ನು ಸರಳ ಕಥೆಯ ಮೂಲಕ ವಿವರಿಸುವ 8-4-3 ನಿಯಮವನ್ನು ತಿಳಿದುಕೊಳ್ಳಿ. ದೀರ್ಘಾವಧಿಯಲ್ಲಿ ಸಂಪತ್ತು ನಿರ್ಮಿಸಲು ಸರಿಯಾದ ಸಮಯವನ್ನು ಹಿಡಿಯುವುದಕ್ಕಿಂತ ತಾಳ್ಮೆ ಮತ್ತು ನಿರಂತರತೆ ಏಕೆ ಮುಖ್ಯ ಎಂಬುದನ್ನು ಈ ಕಥೆ ಹೇಳುತ್ತದೆ.

ಇಂದು ನನ್ನ ಗ್ರಾಹಕ ಅಜಿತ್ ಜೊತೆ ಒಂದು ಆಸಕ್ತಿದಾಯಕ ಸಂಭಾಷಣೆ ನಡೆಯಿತು. ಅವರು ಆರು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯದಿಂದ ನಮ್ಮೊಂದಿಗೆ ಇದ್ದಾರೆ ಮತ್ತು ತಮ್ಮ SIP ಹೂಡಿಕೆಗಳಲ್ಲಿ ಬಹಳ ಶಿಸ್ತುಬದ್ಧರಾಗಿದ್ದಾರೆ.

ಅಜಿತ್: ನನಗೆ SIP ಅಂದರೆ ಬೇಸರವಾಗಿಬಿಟ್ಟಿದೆ. ನಿಜವಾದ ಬೆಳವಣಿಗೆ ಏನೂ ಕಾಣಿಸುತ್ತಿಲ್ಲ. ಪ್ರತಿ ತಿಂಗಳು ಹಣವನ್ನು ಯಾವುದೋ ಗುಳಿಯೊಳಗೆ ಎಸೆಯುತ್ತಿರುವಂತೆ ಅನಿಸುತ್ತಿದೆ.

ನಾನು: ಅಜಿತ್, ನಿನಗೆ ಒಂದು ಕಥೆ ಹೇಳುತ್ತೇನೆ.

ರಾಮು ಒಬ್ಬ ರೈತ.

ಒಂದು ದಿನ ಬೆಳಿಗ್ಗೆ, ತನ್ನ ಮನೆಯ ಹಿತ್ತಲಿನಲ್ಲಿ ಒಂದು ತೆಂಗಿನ ಸಸಿಯನ್ನು ನೆಡಬೇಕು ಎಂದು ನಿರ್ಧರಿಸಿದ.

ಅವನಿಗೆ ಸಿಗಬಹುದಾದ ಅತ್ಯಂತ ಆರೋಗ್ಯಕರ ಸಸಿಯನ್ನು ಖರೀದಿಸಿದ. ಸರಿಯಾದ ಜಾಗವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡ. ಮಣ್ಣನ್ನು ಸಿದ್ಧಪಡಿಸಿ, ತುಂಬಾ ಭರವಸೆಯಿಂದ ಸಸಿಯನ್ನು ನೆಟ್ಟ. ಪ್ರತಿದಿನ ನೀರು ಹಾಕಿದ. ಅಗತ್ಯವಿದ್ದಾಗ ಗೊಬ್ಬರ ಹಾಕಿದ. ದನಕರುಗಳು ಮೇಯದಂತೆ ಅದನ್ನು ಕಾಪಾಡಿದ. ಒಬ್ಬ ಒಳ್ಳೆಯ ರೈತ ಮಾಡಬೇಕಾದ ಎಲ್ಲವನ್ನೂ ಮಾಡಿದ.

ಒಂದು ವರ್ಷ ಕಳೆಯಿತು. ಚಿಕ್ಕ ಸಸಿ ಆರೋಗ್ಯಕರ ಗಿಡವಾಗಿ ಬೆಳೆದಿತ್ತು. ಆದರೆ ಹೂಗಳಿಲ್ಲ. ತೆಂಗಿನಕಾಯಿಗಳಿಲ್ಲ. ಬರೀ ಎಲೆಗಳು. ಇನ್ನೊಂದು ವರ್ಷ ಕಳೆಯಿತು. ಆಗಲೂ ಏನೂ ಇಲ್ಲ.

ಮೂರನೇ ವರ್ಷದ ಹೊತ್ತಿಗೆ ನೆರೆಹೊರೆಯವರು ಅವನನ್ನು ನೋಡಿ ನಗಲು ಆರಂಭಿಸಿದರು. ಬೆಲೆಬಾಳುವ ಜಾಗವನ್ನು ವ್ಯರ್ಥ ಮಾಡುತ್ತಿದ್ದೀಯೆ, ಬೇಗ ಫಲ ಕೊಡುವ ಯಾವುದಾದರೂ ಗಿಡವನ್ನು ನೆಡು ಎಂದು ಸಲಹೆ ನೀಡಿದರು.

ಆದರೆ ರಾಮು ಅವರ ಮಾತನ್ನು ಕಡೆಗಣಿಸಿ ತನ್ನ ಗಿಡವನ್ನು ನೋಡಿಕೊಳ್ಳುವುದನ್ನು ಮುಂದುವರಿಸಿದ.

ವರ್ಷಗಳು ಕಳೆದಂತೆ ಮರ ಎತ್ತರವಾಗಿ, ಬಲವಾಗಿ ಬೆಳೆಯಿತು. ಅದಕ್ಕಿಂತ ಮುಖ್ಯವಾಗಿ, ಯಾರ ಕಣ್ಣಿಗೂ ಕಾಣದಂತೆ ಅದರ ಬೇರುಗಳು ನೆಲದ ಆಳಕ್ಕೆ ಹರಡುತ್ತಿದ್ದವು.

ಒಂದು ದಿನ…ಮೊದಲ ಹೂಗಳು ಕಾಣಿಸಿಕೊಂಡವು. ಸ್ವಲ್ಪ ಸಮಯದಲ್ಲೇ ಮೊದಲ ಎಳನೀರಿನ ಗೊಂಚಲು ಮೂಡಿತು. ಅಲ್ಲಿಂದ ಮುಂದೆ, ಪ್ರತಿ ಋತುವಿನಲ್ಲೂ ಹೆಚ್ಚು ಹೆಚ್ಚು ಫಲ ಸಿಗತೊಡಗಿತು. ಹಲವು ವರ್ಷಗಳ ಕಾಲ ನಿರಾಶೆ ಮೂಡಿಸಿದ್ದ ಅದೇ ಮರ, ನಂತರ ದಶಕಗಳವರೆಗೆ ಅವನಿಗೆ ಫಲ ನೀಡಿತು.

ಅಜಿತ್: interesting ಯಾಗಿದೆ… ಮುಂದುವರಿಸಿ.

ನಾನು: ಅಜಿತ್, ಆ ತೆಂಗಿನ ಮರವೇ ನಿನ್ನ SIP ಇದ್ದಂತೆ.

ನಂತರ ನಾನು ಅವನಿಗೆ ಚಕ್ರಬಡ್ಡಿಯ ಬಗ್ಗೆ ಇರುವ ಒಂದು ಪರಿಕಲ್ಪನೆಯನ್ನು ವಿವರಿಸಿದೆ. ಅದನ್ನೇ 8-4-3 ನಿಯಮ ಎಂದು ಕರೆಯುತ್ತಾರೆ. ನೀವು ಪ್ರತಿ ತಿಂಗಳು SIP ಮೂಲಕ ₹20,000 ಹೂಡಿಕೆ ಮಾಡುತ್ತೀರಿ ಎಂದು ಅಂದುಕೊಳ್ಳೋಣ.

ದೀರ್ಘಾವಧಿಯಲ್ಲಿ ವರ್ಷಕ್ಕೆ 12% ಆದಾಯ ಸಿಗುತ್ತದೆ ಎಂದು ಅಂದಾಜಿಸಿದರೆ, ಮೊದಲ ಎಂಟು ವರ್ಷಗಳಲ್ಲಿ ನಿಮ್ಮ ಹೂಡಿಕೆ ಸುಮಾರು ₹32.3 ಲಕ್ಷಕ್ಕೆ ಬೆಳೆಯುತ್ತದೆ. ಮೊದಲ ನೋಟಕ್ಕೆ ಇದು ಅಷ್ಟೇನೂ ಅದ್ಭುತವಾಗಿ ಕಾಣಿಸದೇ ಇರಬಹುದು.

ಆದರೆ ಮುಂದೆ ಏನಾಗುತ್ತದೆ ನೋಡಿ. ಮುಂದಿನ ನಾಲ್ಕು ವರ್ಷಗಳಲ್ಲಿ, ಅಂದರೆ 9ರಿಂದ 12ನೇ ವರ್ಷದವರೆಗೆ, ನಿಮ್ಮ ಪೋರ್ಟ್‌ಫೋಲಿಯೊಗೆ ಇನ್ನೂ ಸುಮಾರು ₹32 ಲಕ್ಷ ಸೇರುತ್ತದೆ. ಅಂದರೆ, ಮೊದಲ ಎಂಟು ವರ್ಷಗಳಲ್ಲಿ ನಿರ್ಮಾಣವಾದಷ್ಟು ಸಂಪತ್ತು, ನಂತರದ ಕೇವಲ ನಾಲ್ಕು ವರ್ಷಗಳಲ್ಲಿ ನಿರ್ಮಾಣವಾಗುತ್ತದೆ.

ನಂತರ ಬರುತ್ತದೆ ಅತ್ಯಂತ ಆಸಕ್ತಿದಾಯಕ ಹಂತ. ಮುಂದಿನ ಮೂರು ವರ್ಷಗಳಲ್ಲಿ, ಅಂದರೆ 13ರಿಂದ 15ನೇ ವರ್ಷದವರೆಗೆ, ನಿಮ್ಮ ಪೋರ್ಟ್‌ಫೋಲಿಯೊ ₹1 ಕೋಟಿ ದಾಟುತ್ತದೆ. ಮತ್ತೊಂದು ಸುಮಾರು ₹32 ಲಕ್ಷ ಸೇರುತ್ತದೆ. ಆದರೆ ಈ ಬಾರಿ ಕೇವಲ ಮೂರು ವರ್ಷಗಳಲ್ಲಿ!

ಇದೇ 8-4-3 ನಿಯಮ.

ಅಡಿಪಾಯ ನಿರ್ಮಿಸಲು 8 ವರ್ಷಗಳು. ವೇಗ ಪಡೆಯಲು 4 ವರ್ಷಗಳು. ಚಕ್ರಬಡ್ಡಿಯ ನಿಜವಾದ ಶಕ್ತಿಯನ್ನು ಅನುಭವಿಸಲು 3 ವರ್ಷಗಳು.  ಈ ಹಂತದಲ್ಲಿ ನಿಮ್ಮ ಹಣವೇ ನಿಮಗಾಗಿ ಇನ್ನಷ್ಟು ಶ್ರಮಿಸಲು ಆರಂಭಿಸುತ್ತದೆ.

8 4 3 image

ಖಂಡಿತವಾಗಿಯೂ, ಇದು ದೀರ್ಘಾವಧಿಯಲ್ಲಿ ಮಾರುಕಟ್ಟೆಗಳು ಸುಮಾರು 12% ವಾರ್ಷಿಕ ಆದಾಯ ನೀಡಿದಾಗ ಚಕ್ರಬಡ್ಡಿ ಹೇಗೆ ಕೆಲಸ ಮಾಡಿದೆ ಎಂಬುದರ ಆಧಾರದ ಮೇಲಿನ ಒಂದು ಅವಲೋಕನ ಮಾತ್ರ.

ವಾಸ್ತವದಲ್ಲಿ, ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲಂಬಿಸಿ ಈ ಪ್ರಯಾಣ ಸ್ವಲ್ಪ ನಿಧಾನವಾಗಬಹುದು ಅಥವಾ ವೇಗವಾಗಬಹುದು. ನಿಖರವಾದ ಅವಧಿ ಬದಲಾಗಬಹುದು. ಆದರೆ ಚಕ್ರಬಡ್ಡಿಯ ಗಣಿತ ಮಾತ್ರ ಬದಲಾಗುವುದಿಲ್ಲ.

ಹೆಚ್ಚಿನ ಜನರು ಅದ್ಭುತವನ್ನು ಏಕೆ ಕಳೆದುಕೊಳ್ಳುತ್ತಾರೆ?

ರಾಮುವಿನಂತೆಯೇ, ಅನೇಕ SIP ಹೂಡಿಕೆದಾರರು ತಮ್ಮ ಹೂಡಿಕೆ ಫಲ ನೀಡುವ ಮುನ್ನವೇ ಅದನ್ನು ನಿಲ್ಲಿಸುವ ಪ್ರಲೋಭನೆಗೆ ಒಳಗಾಗುತ್ತಾರೆ. ಮಾರುಕಟ್ಟೆಯ ಕುಸಿತಗಳು, ಆತಂಕ ಹುಟ್ಟಿಸುವ ಸುದ್ದಿಗಳು, ಸೋಷಿಯಲ್ ಮೀಡಿಯಾದ ಅಂತ್ಯವಿಲ್ಲದ ಅಭಿಪ್ರಾಯಗಳು ಮತ್ತು ಸುತ್ತಮುತ್ತಲಿನ ನಿರಂತರ ಗದ್ದಲ.  ಇವೆಲ್ಲವೂ “ಏನೂ ಕೆಲಸ ಮಾಡುತ್ತಿಲ್ಲ” ಎಂಬ ಭ್ರಮೆಯನ್ನು ಸೃಷ್ಟಿಸುತ್ತವೆ.

ಕಳೆದ 20 ವರ್ಷಗಳ ನನ್ನ ಅನುಭವದಲ್ಲಿ ನಾನು ಕಲಿತಿರುವುದು ಏನೆಂದರೆ, SIPನ ಆರಂಭಿಕ ವರ್ಷಗಳಲ್ಲಿ ನಿಮ್ಮ ಪೋರ್ಟ್‌ಫೋಲಿಯೊದ ಹೆಚ್ಚಿನ ಬೆಳವಣಿಗೆ ನೀವು ಪ್ರತಿ ತಿಂಗಳು ಹೂಡಿಕೆ ಮಾಡುವ ಹಣದಿಂದ ಬರುತ್ತದೆ.

ಚಕ್ರಬಡ್ಡಿ ಆಗಲೇ ಕೆಲಸ ಮಾಡುತ್ತಿರುತ್ತದೆ. ಆದರೆ ಅದರ ಪರಿಣಾಮ ಕಣ್ಣಿಗೆ ಕಾಣಿಸುವಷ್ಟು ದೊಡ್ಡದಾಗಿರುವುದಿಲ್ಲ. ನಂತರ, ಸುಮಾರು ಎಂಟನೇ ವರ್ಷದ ನಂತರ, ಈ ಸಮೀಕರಣ ನಿಧಾನವಾಗಿ ಬದಲಾಗಲು ಆರಂಭಿಸುತ್ತದೆ. ನಿಮ್ಮ ಆದಾಯವೇ ಮತ್ತಷ್ಟು ಆದಾಯ ಗಳಿಸಲು ಆರಂಭಿಸುತ್ತದೆ.

ಹೀಗೆ, ಮೊದಲಿಗೆ ಕಣ್ಣಿಗೆ ಕಾಣದ ಶಕ್ತಿಯಾಗಿದ್ದ ಚಕ್ರಬಡ್ಡಿ, ನಿಧಾನವಾಗಿ ಸಂಪತ್ತು ನಿರ್ಮಾಣದ ಪ್ರಮುಖ engine ಆಗುತ್ತದೆ. “ನನಗೆ ಹೆಚ್ಚು ಬೆಳವಣಿಗೆ ಕಾಣುತ್ತಿಲ್ಲ” ಎಂದು ನಾಲ್ಕನೇ ಅಥವಾ ಐದನೇ ವರ್ಷದಲ್ಲೇ ಹೂಡಿಕೆಯನ್ನು ನಿಲ್ಲಿಸುವ ಹೂಡಿಕೆದಾರ, ವರ್ಷಗಳ ತಾಳ್ಮೆ ಮತ್ತು ಆರೈಕೆಗೆ ಫಲ ನೀಡಲು ಆರಂಭಿಸುವ ಮುನ್ನವೇ ರಾಮು ತನ್ನ ತೆಂಗಿನ ಮರವನ್ನು ಕಡಿದಂತೆಯೇ.

ನೀವು ಏನು ಮಾಡಬೇಕು?

ಬೇಗ ಆರಂಭಿಸಿ. ನಿರಂತರವಾಗಿರಿ. ಮಾರುಕಟ್ಟೆ ಕುಸಿದಿದೆ ಎಂಬ ಕಾರಣಕ್ಕೆ ನಿಮ್ಮ SIPಗಳನ್ನು ನಿಲ್ಲಿಸಬೇಡಿ. ಪ್ರತಿದಿನ ನಿಮ್ಮ ಪೋರ್ಟ್‌ಫೋಲಿಯೊ ನೋಡಬೇಡಿ. ನೀವು ನಿರಂತರವಾಗಿ ನೋಡುತ್ತಾ ಕುಳಿತರೆ ತೆಂಗಿನ ಮರ ಬೇಗ ಬೆಳೆಯುವುದಿಲ್ಲ. ನಿಮ್ಮ SIP ಕೂಡ ಹಾಗೆಯೇ.

ಪ್ರತಿದಿನವಲ್ಲ, ನಿಯಮಿತ ಅವಧಿಯಲ್ಲಿ ಪರಿಶೀಲಿಸಿ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಕ್ರಿಯೆಯ ಮೇಲೆ ವಿಶ್ವಾಸವಿಡಿ.

8-4-3 ನಿಯಮ ಯಾವುದೇ ಭರವಸೆ ಅಥವಾ ಖಾತರಿ ಅಲ್ಲ. ಚಕ್ರಬಡ್ಡಿ ಅಸಾಧಾರಣವಾಗಿ ಕಾಣಲು ಆರಂಭಿಸುವ ಮೊದಲು, ಬಹಳ ಸಾಮಾನ್ಯವಾಗಿ ಕಾಣಬಹುದು ಎಂಬುದನ್ನು ನೆನಪಿಸುವ ಒಂದು ಸರಳ ನಿಯಮವಷ್ಟೇ.

ಅಜಿತ್ ವಿಷಯಕ್ಕೆ ಬರೋಣ.

ಅವನಿಗೆ ಇನ್ನೂ ಸಂಪೂರ್ಣವಾಗಿ ಮನವರಿಕೆಯಾಗಿಲ್ಲ. ಆದರೆ ಕನಿಷ್ಠ ಹತ್ತು ವರ್ಷಗಳವರೆಗೆ SIP ಮುಂದುವರಿಸಲು ನಿರ್ಧರಿಸಿದ್ದಾನೆ.

ಒಮ್ಮೆ ಅವನು ಚಕ್ರಬಡ್ಡಿಯ ಶಕ್ತಿಯನ್ನು ಸ್ವತಃ ಅನುಭವಿಸಿದ ನಂತರ, ನನ್ನಿಂದ ಮತ್ತೊಂದು ಕಥೆ ಕೇಳುವ ಅಗತ್ಯ ಅವನಿಗೆ ಬರುವುದಿಲ್ಲ ಎಂದು ನನಗನಿಸುತ್ತದೆ. ತನ್ನ ಹಣಕಾಸಿನ ಗುರಿಗಳನ್ನು ತಲುಪುವವರೆಗೆ ಅವನು ತನ್ನ ಹೂಡಿಕೆಯನ್ನು ಮುಂದುವರಿಸುತ್ತಾನೆ ಎಂಬ ವಿಶ್ವಾಸ ನನಗಿದೆ.

Disclaimer: Ara Financial Services Pvt. Ltd. is an AMFI – Registered Mutual Fund Distributor (ARN – 76035). The purpose of this blog is to educate public on topics around personal finance, mutual funds & investing. The scenarios mentioned in the blog are to help readers understand the concept clearly. Do not treat our blogs as investment advice or an invitation/recommendation to invest in mutual funds or capital market or take any investment decision. Ara, its employees or the author cannot be held liable for any investment decisions taken on basis of the information in the above blog/article or any other reasons. Please consult an investment advisor or a mutual fund distributor for all your investment needs.

 

Leave a Comment

Your email address will not be published. Required fields are marked *

ಹೂಡಿಕೆ ಅಥವಾ ವಿಮೆ? ವ್ಯತ್ಯಾಸ ಇರುವುದು ನಮ್ಮ ಮನೋಭಾವದಲ್ಲಿ!

ಹೂಡಿಕೆ ಅಥವಾ ವಿಮೆ? ವ್ಯತ್ಯಾಸ ಇರುವುದು ನಮ್ಮ ಮನೋಭಾವದಲ್ಲಿ!

ಕಳೆದ ವಾರ, ಒಬ್ಬ ಸಂಭಾವ್ಯ ಕ್ಲೈಂಟ್‌ಗೆ ಅವರ ಹಣಕಾಸಿನ ಅಗತ್ಯಗಳನ್ನು ಆಧರಿಸಿ ನನ್ನ ಸಲಹೆಗಳನ್ನು ನೀಡುವ ಮೊದಲು, ಅವರ ಹಣಕಾಸು ಪೋರ್ಟ್‌ಫೋಲಿಯೊವನ್ನು ಪರಿಶೀಲಿಸುತ್ತಿದ್ದೆ. ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ, ಒಂದು ವಿಷಯ ತಕ್ಷಣವೇ ನನ್ನ ಗಮನ ...
Read More →
ತುರ್ತು ನಿಧಿ: ವೇಗವಾಗಿ ಮುನ್ನಡೆಯಲು ಅನುವು ಮಾಡಿಕೊಡುವ ಬ್ರೇಕ್ಗಳು

ತುರ್ತು ನಿಧಿ: ವೇಗವಾಗಿ ಮುನ್ನಡೆಯಲು ಅನುವು ಮಾಡಿಕೊಡುವ ಬ್ರೇಕ್ಗಳು

ಜನರು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದೆಂದರೆ, ತಮ್ಮ ಗಮನವನ್ನೆಲ್ಲಾ ರಿಟರ್ನ್ಸ್, ಮಾರುಕಟ್ಟೆಯ ಅವಕಾಶಗಳು ಮತ್ತು ಸಂಪತ್ತು ಸೃಷ್ಟಿಸುವುದರ ಮೇಲೆ ಕೇಂದ್ರೀಕರಿಸುವುದು. ಎಲ್ಲಿ ಹೂಡಿಕೆ ಮಾಡಬೇಕು, ಎಷ್ಟು ಹೂಡಿಕೆ ಮಾಡಬೇಕು ಮತ್ತು ತಮ್ಮ ಹಣ ಎಷ್ಟು ...
Read More →
AI ಯುಗದಲ್ಲಿ ಹಣಕಾಸು ಸಲಹೆಗಾರರನ್ನು ಆಯ್ಕೆ ಮಾಡುವುದು: ಹೂಡಿಕೆದಾರರು ಏನನ್ನು ಗಮನಿಸಬೇಕು

AI ಯುಗದಲ್ಲಿ ಹಣಕಾಸು ಸಲಹೆಗಾರರನ್ನು ಆಯ್ಕೆ ಮಾಡುವುದು: ಹೂಡಿಕೆದಾರರು ಏನನ್ನು ಗಮನಿಸಬೇಕು

ಇತ್ತೀಚೆಗೆ, ನಮ್ಮ ಹಣಕಾಸಿನ ಯೋಜನೆಗಾಗಿ AI ಬಳಸುವುದರಿಂದ ನಾವು ಎಷ್ಟು ಸಮಯ ಮತ್ತು ಶ್ರಮವನ್ನು ಉಳಿಸಬಹುದು ಎಂಬುದರ ಕುರಿತು ಒಂದು ಲೇಖನವನ್ನು ಓದಿದೆ. ಹೂಡಿಕೆಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲದಿದ್ದರೂ ಸಹ, ಕೆಲವೇ ನಿಮಿಷಗಳಲ್ಲಿ ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp