ಚಾರ್ಲಿ ಮಂಗರ್ ಅವರ ಸಂದರ್ಶನದಿಂದ ನಾನು ಏನು ಕಲಿತೆ?

ನೈತಿಕತೆ, ತಾಳ್ಮೆ, ಸ್ವತಂತ್ರ ಚಿಂತನೆ ಮತ್ತು ನಿರಂತರ ಕಲಿಕೆ,  ಇವು ದೀರ್ಘಕಾಲೀನ ಹೂಡಿಕೆಯ ಯಶಸ್ಸಿನ ಅಡಿಪಾಯ ಎಂದು ಚಾರ್ಲಿ ಮಂಗರ್ ನಂಬಿದ್ದರು. ನಮ್ಮ ಕಾಲದ ಶ್ರೇಷ್ಠ ಹೂಡಿಕೆದಾರರಲ್ಲಿ ಒಬ್ಬರಾದ ಅವರಿಂದ ನಾನು ಕಲಿತ ಕೆಲವು ಕಾಲಾತೀತ ಪಾಠಗಳು ಇಲ್ಲಿವೆ.

 ಕೆಲವು ದಿನಗಳ ಹಿಂದೆ, Harvard Law Bulletinನಲ್ಲಿ ಪ್ರಕಟವಾಗಿದ್ದ ಚಾರ್ಲಿ ಮಂಗರ್ ಅವರ ಹಳೆಯ ಸಂದರ್ಶನವೊಂದು ನನ್ನ ಗಮನಕ್ಕೆ ಬಂತು. ಆ ಸಂದರ್ಶನದಲ್ಲಿ ಅವರು ಹಣ, ವ್ಯವಹಾರ ಮತ್ತು ಜೀವನದ ಬಗ್ಗೆ ಮಾತನಾಡಿದ ರೀತಿ ಬಹಳ ವಾಸ್ತವಿಕವಾಗಿಯೂ, ಆಳವಾದ ಮಾನವೀಯತೆಯಿಂದ ಕೂಡಿದಂತೆಯೂ ಅನಿಸಿತು.

ಆ ಸಂದರ್ಶನ 2001ರಲ್ಲಿ ಪ್ರಕಟವಾಗಿತ್ತು. ಆದರೆ ಅದನ್ನು ಓದುತ್ತಾ ಹೋದಂತೆ, ಒಳ್ಳೆಯ ವಿಚಾರಗಳಿಗೆ ಎಂದಿಗೂ ವಯಸ್ಸಾಗುವುದಿಲ್ಲ ಎಂಬುದು ನನಗೆ ಮತ್ತೊಮ್ಮೆ ಅರಿವಾಯಿತು. ಇಂದು ಅವರು ಇತಿಹಾಸದ ಭಾಗವಾಗಿದ್ದರೂ, 25 ವರ್ಷಗಳ ಹಿಂದೆ ಅವರು ಹಂಚಿಕೊಂಡ ಅನೇಕ ಪಾಠಗಳು ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ.

ನನ್ನ ಗಮನ ಸೆಳೆದ ಮೊದಲ ವಿಚಾರಗಳಲ್ಲಿ ಒಂದು , ನೈತಿಕ ನಡೆ ಉತ್ತಮ ಫಲಿತಾಂಶಗಳಿಗೆ ದಾರಿ ಮಾಡಿಕೊಡುತ್ತದೆ ಎಂಬ ಅವರ ನಂಬಿಕೆ. Shortcutಗಳು, ತ್ವರಿತ ಲಾಭಗಳು ಮತ್ತು ರಾತ್ರೋರಾತ್ರಿ ಯಶಸ್ಸಿನ ಕಥೆಗಳನ್ನು ನಾವು ಆಗಾಗ ಕೇಳುವ ಈ ಜಗತ್ತಿನಲ್ಲಿ, ಮಂಗರ್ ಅವರ ದೃಷ್ಟಿಕೋನ ಬಹಳ ವಿಭಿನ್ನವಾಗಿತ್ತು. ನೈತಿಕತೆ ಮತ್ತು ಸಾಮರ್ಥ್ಯವನ್ನು  ಹೊಂದಿರುವವರು ದೀರ್ಘಾವಧಿಯಲ್ಲಿ ಉತ್ತಮವಾಗಿ ಸಾಧಿಸುತ್ತಾರೆ ಎಂದು ಅವರು ಹೇಳಿದ್ದರು.

ಹಣಕಾಸು ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ, ಈ ವಿಚಾರ ನನಗೆ ಬಹಳ ಹತ್ತಿರವಾಗುತ್ತದೆ. ನಂಬಿಕೆ ಒಂದು ದಿನದಲ್ಲಿ ನಿರ್ಮಾಣವಾಗುವುದಿಲ್ಲ. ನೂರಾರು ಸಣ್ಣಸಣ್ಣ ನಡೆಗಳು ಮತ್ತು ಪ್ರಾಮಾಣಿಕ ಸಂಭಾಷಣೆಗಳ ಮೂಲಕ ಅದನ್ನು ಗಳಿಸಬೇಕು. ನಮ್ಮ ಗ್ರಾಹಕರಿಗಾಗಿ ನಾವು ನಿರ್ಮಿಸುವ ಸಂಪತ್ತು ಮುಖ್ಯ. ಆದರೆ ಅವರು ನಮ್ಮ ಮೇಲೆ ಇಡುವ ನಂಬಿಕೆ ಅದಕ್ಕಿಂತಲೂ ಹೆಚ್ಚು ಅಮೂಲ್ಯ.

 ಒಂದು ಷೇರನ್ನು ಕೇವಲ ಷೇರಾಗಿ ನೋಡದೆ, ಒಂದು ವ್ಯವಹಾರದ ಮಾಲೀಕತ್ವದ ಭಾಗವಾಗಿ ನೋಡಬೇಕು ಎಂಬ ಅವರ ಸಲಹೆ ನನ್ನ ಮನಸ್ಸಿನಲ್ಲಿ ಉಳಿದ ಮತ್ತೊಂದು ಪಾಠ. ಕೇಳಲು ಇದು ಸರಳವಾಗಿ ತೋರುತ್ತದೆ. ಆದರೆ ನಮ್ಮಲ್ಲಿ ಎಷ್ಟು ಮಂದಿ ಇದನ್ನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇವೆ ಎಂಬುದು ನನಗೆ ಅನುಮಾನ.

ಹೂಡಿಕೆದಾರರಾಗಿ ನಾವು ಪ್ರತಿದಿನ ಷೇರು ಬೆಲೆಗಳನ್ನು ಗಮನಿಸುತ್ತೇವೆ. ಬೆಲೆ ಏರಿದಾಗ ಖುಷಿಪಡುತ್ತೇವೆ, ಇಳಿದಾಗ ಆತಂಕಗೊಳ್ಳುತ್ತೇವೆ. ಆದರೆ ಮಂಗರ್ ನಮಗೆ ಇಂದಿನ ಮಾರುಕಟ್ಟೆ ಬೆಲೆಯನ್ನು ಮೀರಿ ನೋಡಲು ನೆನಪಿಸುತ್ತಾರೆ. ಅದರ ಬದಲು ಇನ್ನೂ ಮುಖ್ಯವಾದ ಪ್ರಶ್ನೆಯನ್ನು ಕೇಳಬೇಕು:

“ಈ ವ್ಯವಹಾರದ ಮಾಲೀಕರಾಗಿರುವುದಕ್ಕೆ ನನಗೆ ಸಂತೋಷವಾಗುತ್ತದೆಯೇ?”

ವಾಸ್ತವವಾಗಿ, ಇಡೀ ಸಂದರ್ಶನದಲ್ಲಿ ಅತ್ಯಂತ ಬಲವಾಗಿ ಮೂಡಿಬಂದ ದ್ದು ತಾಳ್ಮೆಯ ಮಹತ್ವ. ಸರಿಯಾದ ಅವಕಾಶಗಳಿಗಾಗಿ ಕಾಯಬೇಕು ಮತ್ತು ನಮಗೆ ಸ್ಪಷ್ಟವಾದ ಅನುಕೂಲವಿರುವಾಗ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಮಂಗರ್ ಹೇಳಿದ್ದಾರೆ.

ಈ ವಿಚಾರ ನನಗೆ ವಿಶೇಷವಾಗಿ ಪ್ರಭಾವಶಾಲಿಯಾಗಿ ಅನಿಸಿತು. ಏಕೆಂದರೆ ಇಂದಿನ ಗ್ಯಾಜೆಟ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ಪತ್ರಿಕೆಗಳು ನಮ್ಮನ್ನು ನಿರಂತರವಾಗಿ ಏನಾದರೂ ಮಾಡುತ್ತಲೇ ಇರಲು ಪ್ರೇರೇಪಿಸುತ್ತವೆ. ಪದೇಪದೇ ಪರಿಶೀಲಿಸಬೇಕು, ಪ್ರತಿಕ್ರಿಯಿಸಬೇಕು, ವಹಿವಾಟು ಮಾಡಬೇಕು, ಸದಾ ಏನಾದರೂ ಮಾಡುತ್ತಿರಬೇಕು ಎಂಬ ಒತ್ತಡ ನಮ್ಮಲ್ಲಿರುತ್ತದೆ.

ಆದರೆ ಯಶಸ್ಸು ಎಂದರೆ ಯಾವಾಗಲೂ ಹೆಚ್ಚು ಕೆಲಸಗಳನ್ನು ಮಾಡುವುದೇ ಅಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಬಹುಶಃ ಕಡಿಮೆ ಕೆಲಸಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಚೆನ್ನಾಗಿ ಮಾಡುವುದೇ ಯಶಸ್ಸಾಗಿರಬಹುದು.

ಇತಿಹಾಸ, ಮನೋವಿಜ್ಞಾನ, ವಿಜ್ಞಾನ ಮತ್ತು ಮಾನವ ನಡವಳಿಕೆಯಂತಹ ವಿವಿಧ ಕ್ಷೇತ್ರಗಳಿಂದ ಕಲಿಯುವುದು ಹಣಕಾಸು ಕ್ಷೇತ್ರದಲ್ಲಿ ಬೆಳೆಯಲು ಅತ್ಯಗತ್ಯ ಎಂಬುದನ್ನೂ ಈ ಸಂದರ್ಶನ ನನಗೆ ನೆನಪಿಸಿತು. ಅತ್ಯುತ್ತಮ ನಿರ್ಧಾರಗಳು ಕೇವಲ ಹಣಕಾಸು ವರದಿಗಳನ್ನು ಅಧ್ಯಯನ ಮಾಡುವುದರಿಂದ ಮಾತ್ರ ಬರುವುದಿಲ್ಲ. ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದಲೂ ಅವು ಬರುತ್ತವೆ.

ಮಾರುಕಟ್ಟೆಗಳು ಬದಲಾಗಬಹುದು, ಭೌಗೋಳಿಕ-ರಾಜಕೀಯ ಪರಿಸ್ಥಿತಿಗಳು ಬದಲಾಗಬಹುದು, ಪ್ರವೃತ್ತಿಗಳು ಬದಲಾಗಬಹುದು. ಆದರೆ ದೀರ್ಘಕಾಲೀನ ಯಶಸ್ಸನ್ನು ನಿರ್ಮಿಸುವ ಮೂಲ ತತ್ವಗಳು ಬಹುತೇಕ ಬದಲಾಗದೆ ಉಳಿಯುತ್ತವೆ ಎಂಬುದನ್ನೂ ಈ ಸಂದರ್ಶನ ನನಗೆ ಮತ್ತೊಮ್ಮೆ ನೆನಪಿಸಿತು.

ನಮಗೆ ತಿಳಿದಿರುವಂತೆ, ಚಾರ್ಲಿ ಮಂಗರ್ ಅವರು ವಾರೆನ್ ಬಫೆಟ್ ಅವರ ದೀರ್ಘಕಾಲದ ವ್ಯವಹಾರ ಪಾಲುದಾರರಾಗಿದ್ದರು ಮತ್ತು ಅತ್ಯುತ್ತಮ ಷೇರು ಆಯ್ಕೆಗಾರರಾಗಿದ್ದರು. ವ್ಯವಹಾರಗಳನ್ನು ಆಳವಾಗಿ ವಿಶ್ಲೇಷಿಸುವ ಸಾಮರ್ಥ್ಯ, ಸರಿಯಾದ ಮನೋಭಾವ ಮತ್ತು ತಾಳ್ಮೆ ಅವರಲ್ಲಿತ್ತು. ಮಾಹಿತಿ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಹೂಡಿಕೆಯಲ್ಲಿ ಮುಂದುವರಿಯುವುದು ಅವರ ವಿಶೇಷತೆ. ದಶಕಗಳ ಕಾಲ ಪಾಲಿಸಿದ ಈ ಶಿಸ್ತು ಅವರಿಗೆ ಅಪಾರ ಸಂಪತ್ತನ್ನು ನಿರ್ಮಿಸಲು ನೆರವಾಯಿತು.

ವೈಯಕ್ತಿಕ ಷೇರು ಹೂಡಿಕೆದಾರರೊಂದಿಗೆ ಹೋಲಿಸಿದರೆ, ಅನೇಕ ರೀತಿಯಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆದಾರರು ಹೆಚ್ಚು ಸುರಕ್ಷಿತ ಸ್ಥಿತಿಯಲ್ಲಿದ್ದಾರೆ. ಯಾವ ವ್ಯವಹಾರಗಳಲ್ಲಿ ಹೂಡಿಕೆ ಮಾಡಬೇಕು ಎಂಬ ಆಯ್ಕೆಯ ಜವಾಬ್ದಾರಿ ವೃತ್ತಿಪರ ಫಂಡ್ ಮ್ಯಾನೇಜರ್‌ಗಳ ಮೇಲಿದೆ. ಅವರು ಸಂಶೋಧನೆಯಲ್ಲಿ ಪರಿಣತಿ ಹೊಂದಿರುತ್ತಾರೆ, ಬಲವಾದ ನಿಯಂತ್ರಣ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸುತ್ತಾರೆ ಮತ್ತು ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡುವ ವಿಶ್ವಾಸಾಧಾರಿತ ಜವಾಬ್ದಾರಿಯನ್ನೂ ಹೊಂದಿರುತ್ತಾರೆ.

ಇತಿಹಾಸವನ್ನು ಗಮನಿಸಿದರೆ, ವೈವಿಧ್ಯಮಯ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ದೀರ್ಘಾವಧಿಗೆ ಹೂಡಿಕೆಯಲ್ಲಿ ಮುಂದುವರಿದ ಹೂಡಿಕೆದಾರರು ಸಾಮಾನ್ಯವಾಗಿ ಉತ್ತಮ ದೀರ್ಘಕಾಲೀನ ಪ್ರತಿಫಲಗಳನ್ನು ಗಳಿಸಿದ್ದಾರೆ. ಇಲ್ಲಿ ವಿಶೇಷ ವಲಯಾಧಾರಿತ ಮತ್ತು ಥೀಮ್ಯಾಟಿಕ್ ಫಂಡ್‌ಗಳನ್ನು ಹೊರತುಪಡಿಸಿ ಹೇಳುತ್ತಿದ್ದೇನೆ.

ಆದರೆ ಇದು ಸಾಧ್ಯವಾಗುವುದು ಅವರು ಅಲ್ಪಾವಧಿಯ ಮಾರುಕಟ್ಟೆ ಚಲನೆಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸದೇ ಇದ್ದಾಗ ಮಾತ್ರ. ಭಯ ಅಥವಾ ಅತಿಯಾದ ಉತ್ಸಾಹದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನೇಕ ಹೂಡಿಕೆದಾರರು ತಮ್ಮದೇ ಸಂಪತ್ತು ನಿರ್ಮಾಣದ ಪ್ರಯಾಣಕ್ಕೆ ಅಡ್ಡಿಯಾಗುತ್ತಾರೆ.

ಕೆಲವೊಮ್ಮೆ, ಅತ್ಯಂತ ಶಕ್ತಿಶಾಲಿ ಹೂಡಿಕೆ ತಂತ್ರವೆಂದರೆ ಕೇವಲ ತಾಳ್ಮೆಯಿಂದ ಉಳಿಯುವುದು ಮತ್ತು ಸಮಯಕ್ಕೆ ತನ್ನ ಕೆಲಸ ಮಾಡಲು ಅವಕಾಶ ನೀಡುವುದು.

ಈ ಸಂದರ್ಶನವನ್ನು ಓದಿ ಮುಗಿಸಿದಾಗ, ಮಂಗರ್ ಅವರ ಪಾಠಗಳು ಕೇವಲ ಹೂಡಿಕೆಗೆ ಮಾತ್ರ ಸೀಮಿತವಲ್ಲ ಎಂಬುದು ನನಗೆ ಅರಿವಾಯಿತು. ಅವು ವೃತ್ತಿಜೀವನ, ಸಂಬಂಧಗಳು, ಮಕ್ಕಳ ಪೋಷಣೆ ಮತ್ತು ಒಟ್ಟಾರೆ ಜೀವನಕ್ಕೂ ಅನ್ವಯಿಸುತ್ತವೆ.

 ಮಾಹಿತಿಯ ಮಹಾಪೂರವೇ ಹರಿಯುತ್ತಿರುವ ಈ ಯುಗದಲ್ಲಿ, ಇಂತಹ ಕಾಲಾತೀತ ವಿಚಾರಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಅತ್ಯಂತ ಅಮೂಲ್ಯವಾಗಬಹುದು.

Leave a Comment

Your email address will not be published. Required fields are marked *

ಆರಂಭದಲ್ಲಿ SIP ರಿಟರ್ನ್ಸ್ ನಿಧಾನವಾಗಿ ಕಾಣಿಸುವುದೇಕೆ? 8-4-3 ನಿಯಮದ ವಿವರಣೆ

SIP ಹೂಡಿಕೆ ಆರಂಭಿಸಿದ ಮೊದಲ ಕೆಲವು ವರ್ಷಗಳಲ್ಲಿ ನಿರೀಕ್ಷಿತ ಬೆಳವಣಿಗೆ ಕಾಣಿಸದೇ ನಿರಾಶೆಯಾಗುತ್ತಿದೆಯೇ? ಚಕ್ರಬಡ್ಡಿಯ ಶಕ್ತಿಯನ್ನು ಸರಳ ಕಥೆಯ ಮೂಲಕ ವಿವರಿಸುವ 8-4-3 ನಿಯಮವನ್ನು ತಿಳಿದುಕೊಳ್ಳಿ. ದೀರ್ಘಾವಧಿಯಲ್ಲಿ ಸಂಪತ್ತು ನಿರ್ಮಿಸಲು ಸರಿಯಾದ ಸಮಯವನ್ನು ಹಿಡಿಯುವುದಕ್ಕಿಂತ ...
Read More →

AI ಚಾಲಿತ ಜಗತ್ತಿನಲ್ಲಿ ಮಕ್ಕಳ ಶಿಕ್ಷಣ ಯೋಜನೆಯನ್ನು ಪೋಷಕರು ಹೇಗೆ ಮರುಚಿಂತನೆ ಮಾಡಬೇಕು?

ಪೋಷಕರು ಯಾವಾಗಲೂ ತಮಗೆ ಪರಿಚಿತವಾಗಿದ್ದ ವೃತ್ತಿಜೀವನಗಳನ್ನು ಗಮನದಲ್ಲಿಟ್ಟುಕೊಂಡೇ ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಿದ್ದಾರೆ. ಆದರೆ ಉದ್ಯೋಗಗಳು ಮತ್ತು ಶಿಕ್ಷಣ ವ್ಯವಸ್ಥೆ ವೇಗವಾಗಿ ಬದಲಾಗುತ್ತಿರುವ AI ಚಾಲಿತ ಜಗತ್ತಿನಲ್ಲಿ, ಶಿಕ್ಷಣ ಯೋಜನೆ ಒಂದು ನಿರ್ದಿಷ್ಟ ಪದವಿಯ ...
Read More →

ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಮರೆಯಾದ ಪ್ರಮುಖ ಕೊಂಡಿ

ಬಹುತೇಕ ಹೂಡಿಕೆದಾರರು ಯಾವ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಮತ್ತು ಯಾವಾಗ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಸಾಕಷ್ಟು ಸಮಯ ಕಳೆಯುತ್ತಾರೆ. ಆದರೆ ಹೂಡಿಕೆಯಿಂದ ಯಾವಾಗ ಹೊರಬರಬೇಕು? ಅನ್ನುವ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಬಹುಸಾರಿ ...
Read More →

Choose The Life Stage That Describes You The Best

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp